ಕೊಳವೆ ಮಾರ್ಗಗಳು

ದ್ರವ ಅಥವಾ ಅನಿಲವನ್ನು ಸಾಗಿಸಲು ನಿರ್ಮಿತವಾದ ವಿಶಿಷ್ಟ ಮತ್ತು ಅತ್ಯಂತ ಅಗ್ಗದ ಸಾಧನ, ಕೊಳವೆ ಸಾಲು (ಪೈಪ್‍ಲೈನ್ಸ್). ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ವಿಶೇಷವಾಗಿ ಇವನ್ನು ಬಳಸಲಾಗುತ್ತಿದೆ. ಬಾವಿಗಳಿಂದ ಹೊರಬರುವ ಉತ್ಪನ್ನವನ್ನು ಕೊಳವೆಗಳ ಮೂಲಕ ಸಂಗ್ರಹಿಸಿ ಅದನ್ನು ಪರಿಷ್ಕರಣ ಕೇಂದ್ರಗಳಿಗೋ ಸಂಧಿಬಿಂದುಗಳಿಗೋ ಸಾಗಿಸಲಾಗುತ್ತದೆ. ಪರಿಷ್ಕರಣವಾದ ಉತ್ಪನ್ನವನ್ನು ವಿತರಣೆ ಮಾಡುವುದಕ್ಕೂ ಕೊಳವೆಗಳನ್ನು ಹಾಕಲಾಗುತ್ತದೆ. ಆದ್ದರಿಂದ ಕೊಳವೆ ಮಾರ್ಗಗಳನ್ನು ಸ್ಥೂಲವಾಗಿ ಸಂಗ್ರಹಣ ಮತ್ತು ವಿತರಣ ಮಾರ್ಗಗಳೆಂದೂ ಪ್ರಧಾನ ಮಾರ್ಗಗಳೆಂದೂ ವಿಂಗಡಿಸಬಹುದು. ಉತ್ಪನ್ನ ಮಾರ್ಗ ಮತ್ತು ಕಚ್ಚಾ ಸಾಮಗ್ರಿ ಮಾರ್ಗ ಎಂದು ಕೂಡ ಇವನ್ನು ವಿಭಾಗಿಸುವುದುಂಟು. ಬಾವಿಯಿಂದ ಸಂಗ್ರಹಣ ಕೇಂದ್ರಕ್ಕೂ ಪರಿಷ್ಕರಣ ಕೇಂದ್ರಗಳಿಗೂ ಸಾಮಗ್ರಿಯನ್ನು ಪಂಪಿಸÀಬೇಕಾಗಬಹುದು. ಇದಕ್ಕಾಗಿ ಪಂಪಣೆ ಕೇಂದ್ರಗಳು ಅಗತ್ಯವಾಗುತ್ತವೆ. ಸಂಗ್ರಹಣೆಯ ತೊಟ್ಟಿಗಳೂ ನಿಯಂತ್ರಣಾಲಯಗಳೂ ಈ ವ್ಯವಸ್ಥೆಯ ಅಂಗಗಳು. ಕೊಳವೆ ಮಾರ್ಗಗಳ ನಿರ್ಮಾಣದಲ್ಲಿ ಈಚೆಗೆ ತೀವ್ರ ಬದಲಾವಣೆಗಳಾಗಿವೆ. ಮೊದಲು ಇವನ್ನು ಮರ ಮತ್ತು ಸಿಮೆಂಟಿನಿಂದ ನಿರ್ಮಿಸಲಾಗುತ್ತಿತ್ತು. ಸೋರುವುದು, ಜಂಗು ಹಿಡಿಯುವುದು, ಕೊಳವೆಗಳ ಘರ್ಷಣೆ, ಕುಗ್ಗುವಿಕೆ-ಇವು ಇಂಥ ಕೊಳವೆಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು. ಅಲ್ಲದೆ ಸಾಮಗ್ರಿಯನ್ನು ದೂರಕ್ಕೆ ಒಯ್ಯಲು ಇವು ಅನುಕೂಲವಾಗಿರಲಿಲ್ಲ. ಈಚೆಗೆ ವಿದ್ಯುತ್ತಿನಿಂದ ವೆಲ್ಡಿಸಿದ ಉಕ್ಕು ಕೊಳವೆಗಳನ್ನು ಬಳಸುತ್ತಾರೆ. ಇವುಗಳ ವ್ಯಾಸ 80 ಸೆಂ.ಮೀ.ವರೆಗೂ ಇರುವುದುಂಟು. ರಾಸಾಯನಿಕ ಲೇಪ ಬಳಿದ ಕೊಳವೆಗಳೂ ಬಳಕೆಗೆ ಬಂದಿವೆ. ತೈಲ ಸಾಗಣೆಗೆ ಪ್ಲಾಸ್ಟಿಕ್ ಕೊಳವೆಗಳನ್ನು ಬಳಸುತ್ತಿರುವುದು ಈಚಿನ ಬೆಳೆವಣಿಗೆ.

	ಕೊಳವೆ ಮಾರ್ಗ ಅತ್ಯಂತ ಅಗ್ಗದ ಸಾಗಣೆಯ ಸಾಧನವಾದರೂ ಇದರ ನಿರ್ಮಾಣ ಬಹಳ ದುಬಾರಿ. ಈ ವಿಚಾರದಲ್ಲಿ ಇದು ರೈಲ್ವೆಯನ್ನು ಹೋಲುತ್ತದೆ. ಆದರೆ ರೈಲ್ವೆ ವ್ಯವಸ್ಥೆಯ ನಿರ್ವಹಣೆ ಮತ್ತು ಚಾಲನೆಗೂ ಬಹಳ ಖರ್ಚು ತಗಲುತ್ತದೆ. ಕೊಳವೆ ಮಾರ್ಗಕ್ಕೆ ಅಷ್ಟು ಖರ್ಚು ತಗಲುವುದಿಲ್ಲ. ಆದರೂ ಅದರ ನಿರ್ಮಾಣದ ಅಗಾಧ ವೆಚ್ಚ ಸಾರ್ಥಕವಾಗಬೇಕಾದರೆ ಕೊಳವೆ ಮಾರ್ಗದಲ್ಲಿ ತೈಲ ಅಥವಾ ಅನಿಲ ಒಂದು ಕನಿಷ್ಠ ಮಿತಿಗಿಂತ ಕಡಿಮೆಯಿಲ್ಲದ ಪರಿಮಾಣದಲ್ಲಿ ಧಾರಾಕಾರವಾಗಿ ಹರಿಯುತ್ತಿರುವುದು ಅವಶ್ಯ. ಕೊಳವೆಗಳ ವೆಚ್ಚ, ಹಳ್ಳ ತೋಡಿ ಅವನ್ನು ಹುಗಿಯುವ ವೆಚ್ಚ, ಪಂಪು ಮನೆಗಳ ಮತ್ತು ಪಂಪಣೆ ಯಂತ್ರಗಳ ವೆಚ್ಚ-ಇವೆಲ್ಲ ಗಮನಾರ್ಹ. ಕೊಳವೆಯ ವ್ಯಾಸ ದೊಡ್ಡದಿದ್ದಷ್ಟೂ  ಸಾಮಗ್ರಿಸಾಗಣೆಯ ಸರಾಸರಿ ವೆಚ್ಚ ಕಡಿಮೆ. ಆದರೆ ಆ ಕೊಳವೆಯ ತುಂಬ ಹರಿಯವಷ್ಟು ಸಾಮಗ್ರಿ ಇರಬೇಕಷ್ಟೆ..

	ಪಾಶ್ಚಾತ್ಯ ದೇಶಗಳಲ್ಲಿ ಕೊಳವೆ ಮಾರ್ಗಗಳು ಸಾಮಾನ್ಯ. ಸ್ಟಿಟ್‍ಜûರ್ಲೆಂಡಿನಲ್ಲಿ ಗೋ ಕೇಂದ್ರಗಳಿಂದ ಹೈನುಮನೆಗಳಿಗೆ ಹಾಲನ್ನು ಸಾಗಿಸಲು 12.7 ಮಿ.ಮೀ. ಪ್ಲಾಸ್ಟಿಕ್ ಕೊಳವೆಗಳನ್ನು ಹಾಕಲಾಗಿದೆ. ಅಮೆರಿಕದ ಒಟ್ಟು ಸಾಗಣೆಯಲ್ಲಿ ಸೇ.15 ಭಾಗ ಕೊಳವೆ ಮಾರ್ಗಗಳದು. ಪೂರ್ವ ಯೂರೋಪಿನಲ್ಲಿ ಯೂರಲ್ ಪರ್ವತಗಳ ಕಚ್ಚಾ ತೈಲ 4,500 ಕಿಮೀ. ಗಳ ದೂರ-ಪೋಲೆಂಡ್, ಜರ್ಮನಿಗಳ ಮೂಲಕ-ಹಂಗರಿ ಜೆಕೊಸ್ಲವಾಕಿಯಗಳಿಗೆ ಸಾಗುತ್ತದೆ. ಕಲ್ಲಿದ್ದಲು ಮತ್ತು ಧಾನ್ಯಗಳು ಕೂಡ (ಪುಡಿ ಅಥವಾ ಹಿಟ್ಟಿನ ರೂಪದಲ್ಲಿ) ಹೀಗೆ ಸಾಗುವುದುಂಟು. ಕೊಳವೆಯ ಮನೆಗಳಿಂದ ಉಕ್ಕಿನ ಕಾರ್ಖಾನೆಗಳಿಗೆ ಮತ್ತು ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಲನ್ನು ಸರಬರಾಯಿ ಮಾಡಲು ಕೊಳವೆ ಮಾರ್ಗಗಳನ್ನು ಬಳಸಬೇಕೆಂಬುದಾಗಿ ಭಾರತದಲ್ಲಿ ಕಲ್ಲಿದ್ದಲು ಸಾಗಣೆಯ ಬಗ್ಗೆ ಅಧ್ಯಯನ ನಡೆಸಿದ ವಿಶ್ವ ಬ್ಯಾಂಕ್ ತಂಡ ಸಲಹೆ ಮಾಡಿದೆ.

	ಇತ್ತೀಚೆಗೆ ಭಾರತದಲ್ಲಿ ಕೊಳವೆ ಮಾರ್ಗಗಳು ಹೆಚ್ಚು ಬಳಕೆಗೆ ಬರುತ್ತಿವೆ. ಎರಡನೆಯ ಪಂಚವಾರ್ಷಿಕ ಯೋಜನೆಯ ಪ್ರಾರಂಭದಲ್ಲಿ ಭಾರತದ ಅಸ್ಸಾಮಿನ ಡಿಗ್‍ಬೋಯಿಯಲ್ಲಿ ಒಂದೇ ಒಂದು ತೈಲ ಗಣಿಯಿತ್ತು.  ಆದರೆ 1956ರಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಸಮಿತಿಯ ಮತ್ತು ಆಯಿಲ್ ಇಂಡಿಯ ಲಿಮಿಟೆಡ್ ಸಂಸ್ಥೆಯ ಪ್ರಯತ್ನಗಳಿಂದಾಗಿ ಉತ್ತರ ಅಸ್ಸಾಂ ಮತ್ತು ಗುಜರಾತ್ ಪ್ರದೇಶಗಳಲ್ಲಿ ಹೆಚ್ಚು ತೈಲ ಮತ್ತು ಅನಿಲಗಳನ್ನು ಉತ್ಪಾದಿಸಲು ಸಾಧ್ಯವಾಗಿದೆ. ಪೆಟ್ರೋಲಿಯಂ ಹಾಗೂ ಇತರ ತೈಲ ವಸ್ತುಗಳು ದೇಶದಲ್ಲಿ ಹಲವೆಡೆ ಉತ್ಪಾದನೆಯಾಗುತ್ತಿವೆ.

	ಭಾರತದಲ್ಲಿ ಈವರೆಗೆ ಜಾರಿಗೆ ಬಂದಿರುವ ಕೊಳವೆ ಮಾರ್ಗ ಕಾಮಗಾರಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು : 1.ನಹರ್‍ಕಟಿಯಾ-ನುನ್ಮತಿ-ಬರೌನಿ ಕಚ್ಚಾ ತೈಲ ಕೊಳವೆ ಮಾರ್ಗ, 2.ಸಿಲಿಗುರಿ ಉತ್ಪನ್ನ ಕೊಳವೆ ಮಾರ್ಗ, 3.ಹಾಲ್ದಿಯಾ-ಬರೌನಿ-ಕಾನ್ಪುರ ಕೊಳವೆಮಾರ್ಗ ಮತ್ತು 4.ಗುಜರಾತ್ ಕೊಳವೆ ವ್ಯವಸ್ಥೆ.

	ಟ್ರಾಂಬೇ ಮತ್ತು ವಿಶಾಖಪಟ್ಟಣಗಳಲ್ಲಿ ಖಾಸಗಿ ವಲಯಕ್ಕೆ ಸೇರಿದ ಮೂರು ತೈಲ ಪರಿಷ್ಕರಣ ಕೇಂದ್ರಗಳಿವೆ. ಭಾರತ ಸರ್ಕಾರ ಗೌಹಾತಿ, ಬರೌನಿ, ಕಾಯಲಿ ಮತ್ತು ಕೊಚ್ಚಿ ಮದ್ರಾಸ್ ಹಾಗೂ ಹಾಲ್ದಿಯಾಗಳಲ್ಲಿ ತೈಲ ಪರಿಷ್ಕರಣ ಕೇಂದ್ರಗಳು.

	ಕೊಳವೆ ಮಾರ್ಗಗಳನ್ನು ಸರಿಯಾಗಿ ನಿಯಂತ್ರಿಸುವುದು ಅತಿಮುಖ್ಯ ವಿಷಯ. ಇಲ್ಲದಿದ್ದರೆ ಸ್ವತ್ತಿಗೆ ಅಪಾರ ಹಾನಿಯುಂಟಾಗುವುದಲ್ಲದೆ ಅದರಿಂದ ಅನೇಕ ಕೈಗಾರಿಕೆಗಳ ಉತ್ಪಾದನಕಾರ್ಯಕ್ಕೆ ತಡೆಯುಂಟಾಗುತ್ತದೆ. ಆಸ್ಫೋಟನೆಯ ಅಪಾಯ ಅಧಿಕ.                      (ಸಿ.ಸಿ.ಪಿ.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ